ಶುಕ್ರವಾರ, ಫೆಬ್ರವರಿ 26, 2010

"ನವಿಲಗರಿ" ನನಗೇಕೆ ಅಚ್ಚುಮೆಚ್ಚು ?


ನಾನು ಮಲೆನಾಡಿನವನು. ನಮ್ಮ ಮನೆಯ ಸುತ್ತಲೂ ದಟ್ಟಕಾಡು. ಮುಂದೆ ಅಡಿಕೆ, ಕಾಫಿ, ಲಕ್ಕಿಗಳು ಬೆಳೆದುನಿಂತ ತೋಟ. ಅತಿ ಶೀತಲ, ಇಲ್ಲಿನ ಚಳಿಗಾಲ. ದಿನಗಳಲ್ಲಿ ಹೆಚ್ಚಾಗಿ ನವಿಲು ತನ್ನ ಗರಿಯನ್ನು ಅಲ್ಲಲ್ಲಿ ಉದುರಿಸಿ ಹೋಗಿರುವುದನ್ನು ಹಲಬಾರಿ ಕಂಡಿದ್ದೇನೆ. ಚಿಕ್ಕವನಿರುವಾಗ ಮನಸ್ಸಾದಾಗಲೆಲ್ಲ ನಾನು,ನನ್ನ ಅಜ್ಜ ಕಾಡಿಗೆ ಹೋಗುತ್ತಿದ್ದೆವು. ಕಾಡು ಕಿಲೋಮೀಟರುಗಟ್ಟಲೆ ದೂರವೇನಲ್ಲ. ಮನೆಯ ಅಂಗಳದಿಂದ ಎರಡೇ ಹೆಜ್ಜೆ... ಎತ್ತ ನಡೆದರೂ ಕಾಡಿನ ಬಾಗಿಲು ಎದುರಾಗುತ್ತದೆ. ಮೊದಲಿನಿಂದಲೂ ಇಲ್ಲೆಲ್ಲಾ ನಾನು ವಿವಿಧ ಗಿಡ, ಮರ, ಪ್ರಾಣಿ, ಕೀಟ ಅಂತೆಯೇ ಬಣ್ಣ ಬಣ್ಣದ ಬಗೆಬಗೆಯ ನಮೂನೆಯ ಹಕ್ಕಿಗಳನ್ನು ಕಂಡು ಅಚ್ಚರಿಪಡುತ್ತಿದ್ದೇನೆ. ಎಂತಹ ಅಧ್ಭುತ ಸೃಷ್ಟಿ ಪ್ರಕ್ರುತಿಯದ್ದು!

ಕಾಡಿನಲ್ಲಿ ಒಳಹೋಗಲು ದಾರಿ ಎಂಬುದಿಲ್ಲ. ಮೆಲ್ಲಮೆಲ್ಲನೆ ಮುಳ್ಳಿನ ಗಿಡ, ಕಾಲು ತೊಡರುವ ಬಳ್ಳಿಗಳನ್ನು ಸಣ್ಣ ಕುಡುಗೋಲಿನಿಂದ ಸವರುತ್ತಾ ಮುಂದೆ ಸಾಗಬೇಕು. ಅದುವೇ ನವಿಲುಗಳ ಸ್ವರ್ಗ! ಅಲ್ಲಲ್ಲಿ ಪೂರ್ಣಾಕೃತಿಯ, ಅರ್ಧಪಾರ್ಶ್ವದ ನವಿಲುಗರಿಗಳು ಗಾವುದ ದೂರಕ್ಕೆ ಹರಡಿಕೊಂದಿರುವುದಿದೆ. ಸಾಮಾನ್ಯವಾಗಿ ನಮ್ಮಲ್ಲಿ ಇವುಗಳನ್ನು ಹೆರುಕಿ ತಂದು, ಮನೆಯಲ್ಲಿ ಮಗುವಿದ್ದರೆ ಅದರ ತೊಟ್ಟಿಲಿಗೆ ತೂಗುಹಾಕುತ್ತಾರೆ. ಜಾನುವಾರುಗಳಿಗೆ ಗಾಯವಾದರೆ, ಮುಲಾಮು ಹಚ್ಚಲೂ ಸಹ ಹಕ್ಕಿಗಳ ಉದುರಿಬಿದ್ದ ಪುಕ್ಕಗಳನ್ನೇ ಬಳಸುವುದು. ನಾವು, ಮಕ್ಕಳು ನವಿಲಗರಿ ಒಟ್ಟುಹಾಕಿ ಪುಸ್ತಕದೊಳಗೆ ಅವಿತಿಟ್ಟು ಅವುಗಳು 'ಮರಿ ಹಾಕಿವೆಯೇ?' ಎಂದು ದಿನಕ್ಕೆರೆದು ಬಾರಿ ತೆರೆದು ನೋಡುತ್ತಿದ್ದೆವು.

ಒಂದು ನವಿಲಗರಿ ಹಿಡಿದು ನೋಡಿ. ಅದರ ನವಿರಾದ ಮಾಟ, ಹೊಳೆವ ಬಣ್ಣ, ನಾಜೂಕಾದ ವರ್ಣಸಂಕರ ನೋಡಿದರೇ ಗೊತ್ತಾದೀತು, ಪ್ರಕೃತಿ ಎಂತಹ ಅಧ್ಭುತ ಸೌಂದರ್ಯ ಶಿಲ್ಪಿ ಎಂದು. ಬಗೆಬಗೆಯ ಗರಿ-ಪುಕ್ಕಗಳನ್ನು ನೋಡಿರುತ್ತೇವೆ; ನವಿಲಗರಿಯ ಚಾಮರಾದಂತ ರೂಪು ಎಷ್ಟೊಂದು ವಿಭಿನ್ನ. ನವಿಲಗರಿಯು ಪ್ರತಿಯೊಂದು ಬಗೆಯಲ್ಲೂ ನಾಜೂಕು. ಗರಿಯ ಜೂಲನ್ನು ನೋಡುವಿರಾದರೆ, ಅದು ಬೇರೆ ಪುಕ್ಕಗಳಿಗಿರುವಂತೆ ಒಟ್ಟುಒತ್ತಾಗಿ ಬಿಗಿಯಾಗಿರುವುದಿಲ್ಲ. ಎಳೆಎಳೆಯಾಗಿ ಗಾಳಿಗೆ ಹಗುರವಾಗಿ ತೇಲುತ್ತದೆ. ಬಣ್ಣದ ವಿಷಯದಲ್ಲೂ ಇದು ಸತ್ಯವೇ. ಹೆಚ್ಚೂಕಡಿಮೆ ಎಲ್ಲ ಬಣ್ಣಗಳನ್ನೂ ನವಿಲಗರಿ ಹಿಡಿದಿಟ್ಟುಕೊಂಡಿದೆ. ಬಣ್ಣ ಕೇವಲ ಬಣ್ಣವಾಗಿರದೆ, ನಿರಭ್ರಶುಭ್ರ ಗಾಜಿನಂತೆ ಹೊಳೆಯುತ್ತದೆ. ಗರಿಯಲ್ಲಿರುವ ಬಣ್ಣದ ಹಚ್ಚೆಯೂ ಅಪೂರ್ವ!ಅಲ್ಲಿ ಕಾಣುವ ಚಿತ್ತಾರಕ್ಕೆ ತನ್ನತನವಿದೆ. ಯಾವುದೋ ನಿಯಮಕ್ಕೆ ಬದ್ಧವಾದಂತೆ ಏಕರೂಪತೆ ಅದರಲ್ಲಿ ಎದ್ದು ಕಾಣುತ್ತದೆ. ಇಂತಿರುವ ನವಿಲಗರಿಯನ್ನು ಬಣ್ಣಿಸಿ ಮುಗಿಯಲುಂಟೇ?

ಪೂರ್ವಜರು ನಮ್ಮಷ್ಟು ಪ್ರಕೃತಿಯಿಂದ ದೂರ ಉಳಿದವರಲ್ಲ. ಹಿರಿಯ ಜೀವಗಳು ಇಷ್ಟೊಂದು ಸುಂದರ ನವಿಲಗರಿಯನ್ನು ನೋಡಿ ಅದೆಷ್ಟು ಅಚ್ಚರಿಪತ್ತಿರಲಿಕ್ಕಿಲ್ಲ? ಎಷ್ಟೆಲ್ಲಾ ಮಕ್ಕಳು ನವಿಲಗರಿಯನ್ನು ನೋಡುತ್ತಾ ಆಡುತ್ತಾ ಬೆಳೆದಿರಬಹುದು? ಇನ್ನೆಷ್ಟು ಪ್ರೇಮಿಗಳ ಪ್ರೇಮನಿವೇದನೆಗೆ ಇದು ಸಾಕ್ಷಿಯಾಗಿದೆಯೋ? ಹೇಳಿದಷ್ಟೂ ಹೇಳುವಷ್ಟು, ನೋಡಿದಷ್ಟೂ ನೋಡುವಷ್ಟುಮನಸೂರೆಗೊಳ್ಳುವ ಗರಿಯನ್ನು ಸ್ವಲ್ಪವಾದರೂ ಹೋಗಳದಿರುವುದು ತರವೇ? ಇಂತಹ ನವಿಲಗರಿಯನ್ನು ನಾ ಮೆಚ್ಚಲಾರದೆ ಹೊದೇನೆ...?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ